ನಿಮ್ರೂಡ್
	ಅಸ್ಸಿರಿಯದ ಪ್ರಾಚೀನ ನಗರವೊಂದರ ಈಗಿನ ಹೆಸರು. ಬೈಬಲಿನಲ್ಲಿ ಇದನ್ನು ಕೇಲ, ಕ್ಯಾಲ್ಹೂ ಎಂದು ಕರೆಯಲಾಗಿದೆ. ಇದು ಇರಾಕಿನ ಅಲ್-ಮಾಸಿಲ್ ರಾಜ್ಯಪಾಲಿಕೆಯಲ್ಲಿ ಮೋಸುಲ್‍ಗೆ ದಕ್ಷಿಣದಲ್ಲಿದೆ. ಕ್ರಿ.ಪೂ. 13ನೆಯ ಶತಮಾನದಲ್ಲಿ 1ನೆಯ ಷ್ಯಾಲ್‍ಮನೀಸರ್ ಈ ನಗರವನ್ನು ಸ್ಥಾಪಿಸಿದ. 2ನೆಯ ಆಷೂರ್‍ನಾಸಿóರ್‍ಪಾಲ್ (ಕ್ರಿ.ಪೂ. ಸು.883-ಕ್ರಿ.ಪೂ.ಸು. 859) ಇದನ್ನು ತನ್ನ ರಾಜಧಾನಿ ಹಾಗೂ ಸೇನಾಕೇಂದ್ರವನ್ನಾಗಿ ಮಾಡಿಕೊಳ್ಳುವವರೆಗೆ ಇದು ಹೆಚ್ಚು ಪ್ರಸಿದ್ಧಿಗೆ ಬಂದಿರಲಿಲ್ಲ. ಅವನೂ ಅನಂತರ ಬಂದ 3ನೆಯ ಷ್ಯಾಲ್‍ಮನೀಸರನೂ ಇಲ್ಲಿ ದುರ್ಗವನ್ನೂ ಹೊರಗೋಡೆಯನ್ನೂ ಕಟ್ಟಿಸಿದರು. ಇಲ್ಲಿಯ ಅತ್ಯಂತ ಪ್ರಮುಖ ಧಾರ್ಮಿಕ ಕಟ್ಟಡವನ್ನು ರಾಣಿ ಸಾಮುರಾಮಾಟ್ ಸ್ಥಾಪಿಸಿದಳು. ನಾಬು ದೇವತೆಯ ಮಂದಿರ ಇದರಲ್ಲಿ ಮುಖ್ಯವಾದ್ದು. ಇಲ್ಲಿಯ ಗ್ರಂಥಾಲಯದಲ್ಲಿ ಅನೇಕ ಧಾರ್ಮಿಕ ಹಾಗೂ ಮಾಂತ್ರಿಕ ಗ್ರಂಥಗಳಿದ್ದವು; ಅಸ್ಸಿರಿಯನ್ ದೊರೆಗಳ ವಂಶಾವಳಿಯೂ ಇತ್ತು. ಈ ನಿವೇಶನದಲ್ಲಿ ಉತ್ಖನನಮಾಡಿದಾಗ ದಂತದಲ್ಲಿ ಕೊರೆದ ಅನೇಕ ವಸ್ತುಗಳೂ ಇತರ ಪದಾರ್ಥಗಳೂ ದೊರಕಿವೆ. ಕೇಲ ನಗರದ ಕ್ರಿ.ಪೂ. 7ನೆಯ ಶತಮಾನದಲ್ಲಿ ಕುಗ್ಗಿತು. ಸಾರ್ಗೊನಿಡರು ನಿನೆವೆಯನ್ನು ರಾಜಧಾನಿಯಾಗಿ ಮಾಡಿಕೊಂಡರು. ಕ್ರಿ.ಪೂ. 614ರಲ್ಲಿ ಇದು ಆಕ್ರಮಣಕ್ಕೊಳಗಾಗಿ ನಾಶವಾಯಿತು. ಅನಂತರ ಇದು ಗ್ರೀಕರ ಅಧೀನವಾಯಿತೆಂದು ಹೇಳಲಾಗಿದೆ. ಆದರೆ ಇದು ಮತ್ತೆ ಮೊದಲಿನ ಪ್ರಾಮುಖ್ಯ ಗಳಿಸಲಿಲ್ಲ.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ